ಸಮುದಾಯದ ಒಗ್ಗಟ್ಟು ಮತ್ತು ಸಹಕಾರ ಗಾಯತ್ರಿ ಪತ್ತಿನ ಸಹಕಾರ ಸಂಘದ ಯಶಸ್ಸಿಗೆ ಕಾರಣ : ಸಿ.ಡಿ.ರವಿ

ಹುಳಿಯಾರು: ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರು ವಿಪ್ರ ಸಮುದಾಯದವರ ಒಗ್ಗಟ್ಟು ಮತ್ತು ಸಹಕಾರವೇ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಯಶಸ್ಸಿಗೆ ಮುಖ್ಯ ಕಾರಣ ಎಂದು ಹಿರಿಯ ಪತ್ರಕರ್ತ ಸಿ.ಡಿ. ರವಿ ಶ್ಲಾಘಿಸಿದರು.

ಅವರು ಹುಳಿಯಾರಿನ ಶ್ರೀ ಸೀತಾರಾಮ ಪ್ರತಿಷ್ಠಾನ ಟ್ರಸ್ಟ್‌ನ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹೋತ್ಸವ ಮತ್ತು ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ತಾಲೂಕು ಕೇಂದ್ರವಾದ ಚಿಕ್ಕನಾಯಕನಹಳ್ಳಿಯಲ್ಲಿ ಸ್ಥಳ ಮತ್ತು ಸೌಲಭ್ಯಗಳ ಕೊರತೆಯಿಂದ ಈ ಸಂಘವನ್ನು ಹುಳಿಯಾರಿನಲ್ಲಿ ಸ್ಥಾಪಿಸಬೇಕಾಯಿತು. ಆದರೆ ಎಲ್ಲರ ಒಗ್ಗಟ್ಟಿನಿಂದ ಕಷ್ಟಗಳನ್ನು ಎದುರಿಸಿ, ಕಳೆದ 10 ವರ್ಷಗಳಿಂದ ಸಂಘವು ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು.

ಗ್ರಾಮೀಣ ಭಾಗದಲ್ಲಿ ಸಮುದಾಯದ ಸಂಖ್ಯಾಬಲ ಕ್ಷೀಣಿಸುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಒಗ್ಗಟ್ಟು ಮತ್ತು ಪರಸ್ಪರ ಸಹಕಾರದಿಂದ ಇಂತಹ ಸಮಸ್ಯೆಗಳನ್ನು ಎದುರಿಸಬಹುದು ಎಂದು ಕಿವಿಮಾತು ಹೇಳಿದರು.

₹3.25 ಲಕ್ಷ ನಿವ್ವಳ ಲಾಭ ಗಳಿಕೆ :

ಸಂಘದ ಅಧ್ಯಕ್ಷರಾದ ಹು. ಕೃ. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ, ಬ್ಯಾಂಕ್ ಈ ವರ್ಷ ₹3,25,000 ನಿವ್ವಳ ಲಾಭ ಗಳಿಸಿದೆ ಎಂದು ಪ್ರಕಟಿಸಲಾಯಿತು.

ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಅವರು ಆಡಿಟ್ ವರದಿ ಮತ್ತು ಮುಂದಿನ ಸಾಲಿನ ಅಂದಾಜು ಬಜೆಟ್ ಮಂಡಿಸಿದರು. ಸದಸ್ಯರುಗಳ ನಿರಂತರ ಸಹಕಾರದಿಂದ ಸಂಘ ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದು ಅಧ್ಯಕ್ಷ ವಿಶ್ವನಾಥ್ ಹೇಳಿದರು.

ಸಮಾರಂಭದ ಅಂಗವಾಗಿ ತಾಲ್ಲೂಕಿನ ವಿಪ್ರ ಸಮಾಜದ 80 ವರ್ಷದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.

227

© ಹುಳಿಯಾರು ಸಮಗ್ರ ಸುದ್ಧಿ . All Rights Reserved.