ಹುಳಿಯಾರು ದುರ್ಗಮ್ಮನ ಜಾತ್ರೆ
ಹುಳಿಯಾರು : ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ 53ನೇ ವರ್ಷದ ಜಾತ್ರಾಮಹೋತ್ಸವ ಏ.12 ರ ಶನಿವಾರದಿಂದ ಪ್ರಾರಂಭಗೊಂಡು 20 ರ ಭಾನುವಾರದವರೆಗೆ ಒಂಬತ್ತು ದಿನಗಳ ಕಾಲ ಜರುಗಲಿದೆ.
ಏ.12 ರ ಶನಿವಾರ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದವರಿಂದ ಹಾಗೂ 13 ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನ ಪಾಳ್ಯದ ಭಕ್ತಾಧಿಗಳಿಂದ ಅಮ್ಮನವರಿಗೆ ಮಡಿಲಕ್ಕಿ ಸೇವೆ ನಡೆಯಲಿದೆ. ಏ.14ರ ಸೋಮವಾರ ಬೆಳಿಗ್ಗೆ ಎಡೆಸೇವೆ,ಸಂಜೆ ಅಮ್ಮನವರ ಮಧುವಣಗಿತ್ತಿ ಕಾರ್ಯ ಹಾಗೂ ಧ್ವಜಾರೋಹಣ ಮತ್ತು ಅಂಕುರಾರ್ಪಣೆ ಕಾರ್ಯ ನಡೆಯಲಿದೆ. ಏ.15 ರ ಮಂಗಳವಾರ ಗ್ರಾಮಸ್ಥರಿಂದ ಆರತಿಬಾನ, ಎಡೆಸೇವೆ ನಡೆಯಲಿದೆ. ಏ.16ರ ಬುಧವಾರ ರಾತ್ರಿ ಹುಳಿಯಾರಿನ ಹುಳಿಯಾರಮ್ಮ, ಕೆಂಚಮ್ಮನವರು,ಹೊಸಹಳ್ಳಿಯ ಶ್ರೀ ಕೊಲ್ಲಾಪುರದಮ್ಮ ,ಹೊಸಹಳ್ಳಿ ಪಾಳ್ಯದ ಅಂತರಘಟ್ಟೆಅಮ್ಮ, ಗೌಡಗೆರೆಯ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ಕೆಸಿ ಪಾಳ್ಯದ ಶ್ರೀ ಅಂತರಘಟ್ಟಮ್ಮ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಗಂಗಾಸ್ನಾನಕ್ಕೆ ಹುಳಿಯಾರು ಕೆರೆಗೆ ದಯಮಾಡಿಸುವುದು. ಏ.17ರ ಗುರುವಾರ ಮುಂಜಾನೆ 7ಕ್ಕೆ ಕೆರೆಯ ಬಾವಿಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವುದು. ಅದೇ ದಿನ ರಾತ್ರಿ ಉಯ್ಯಾಲೋತ್ಸವ ನಡೆಯಲಿದೆ. ಇದೇ ದಿನ ಸಂಜೆ 7 ಗಂಟೆಗೆ ಶಾಸಕರಾದ ಸಿ.ಬಿ. ಸುರೇಶ್ ಬಾಬು ಅವರ ಪ್ರಾಯೋಜಕತ್ವದಲ್ಲಿ ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ನಟರಾಜ್ ಎಂಟರ್ಟ್ರೈನರ್ಸ್ ತಂಡದಿಂದ ಸರಿಗಮಪ ಸ್ಟಾರ್ ಸಿಂಗರ್ಸ್ಗಳಿಂದ ಸಂಗೀತ ಸಂಜೆ ನಡೆಯಲಿದೆ.
ಏ.18ರ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ʼಬ್ರಹ್ಮರಥೋತ್ಸವʼ ನಡೆದು ನಂತರ ವಸಂತಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆ ವಿನಾಯಕನಗರದ ದುರ್ಗಮ್ಮನ ಮದಾಲ್ಸಿ ಉತ್ಸವ ಜರುಗಲಿದೆ. ಇದೇ ದಿನ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಶ್ರೀ ಧನಂಜಯ ಅಘೋರಿ ನಾಗಸಾಧುಗಳು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.
ಏ.19ರ ಶನಿವಾರ ಬೆಳಿಗ್ಗೆ ಸಿಡಿ ಕಾರ್ಯ ,ಓಕಳಿಸೇವೆ, ಕಂಕಣ ವಿಸರ್ಜನೆ ನಡೆದು ಏ.20 ರ ಭಾನುವಾರದಂದು ಮಡಿಲಕ್ಕಿ ಸೇವೆ ನಡೆಯುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.
ಹುಳಿಯಾರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಮಿಟಿಯವರು ಕೋರಿದ್ದಾರೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.