ಹುಳಿಯಾರು : ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಯಳನಾಡು ಗ್ರಾಮದ ಐತಿಹಾಸಿಕ ಶ್ರೀ ಗುರು ಸಿದ್ದರಾಮೇಶ್ವರ ದೇವಸ್ಥಾನದ ದಸರಾ ಮಹೋತ್ಸವದ ಸಿದ್ಧತೆಗಳ ಕುರಿತು ತಾಲೂಕು ಆಡಳಿತ ಇನ್ನೂ ಸಭೆ ನಡೆಸದಿರುವುದು ಭಕ್ತರು ಮತ್ತು ಗ್ರಾಮಸ್ಥರಲ್ಲಿ ಆತಂಕ ಮತ್ತು ನಿರಾಸೆ ಮೂಡಿಸಿದೆ. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲವು ಮುಜರಾಯಿ ಇಲಾಖೆಗೆ ಸೇರಿದ್ದು, ಇಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುವುದು ವಾಡಿಕೆ.
ಪ್ರತಿ ವರ್ಷ ದಸರಾ ಮಹೋತ್ಸವಕ್ಕೂ ಒಂದು ತಿಂಗಳ ಮುಂಚಿತವಾಗಿ ತಾಲೂಕು ಆಡಳಿತ ಸಭೆ ನಡೆಸಿ ಸಿದ್ಧತೆಗಳ ಬಗ್ಗೆ ಚರ್ಚಿಸುತ್ತಿತ್ತು. ಈ ಸಭೆಯಲ್ಲಿ ಬೆಸ್ಕಾಂ, ನಾಡಕಚೇರಿ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಜಾತ್ರೆಯ ಸುಗಮ ನಿರ್ವಹಣೆಗೆ ಯೋಜನೆ ರೂಪಿಸುತ್ತಿದ್ದರು. ಆದರೆ ಈ ವರ್ಷ, ದಸರಾ ಸಮೀಪಿಸುತ್ತಿದ್ದರೂ ಯಾವುದೇ ಸಭೆ ನಡೆದಿಲ್ಲ. ಇದರಿಂದಾಗಿ ಪೂಜಾ ಕಾರ್ಯಕ್ರಮಗಳ ದಿನಾಂಕ ನಿಗದಿ, ಆಹ್ವಾನ ಪತ್ರಿಕೆ ಮುದ್ರಣ ಹಾಗೂ ಇತರೆ ಅಗತ್ಯ ಸಿದ್ಧತೆಗಳು ವಿಳಂಬವಾಗುತ್ತಿವೆ.
ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದ್ದು ಸಂಪ್ರದಾಯಗಳಿಗೆ ಅನುಗುಣವಾಗಿ 11 ದಿನಗಳ ಕಾಲ ನಡೆಯುವ ಈ ಮಹೋತ್ಸವವು ಯಾವುದೇ ಅಡೆತಡೆಯಿಲ್ಲದೆ ನೆರವೇರಬೇಕಿದೆ.ಹಾಗಾಗಿ ಸಾವಿರಾರು ಭಕ್ತರ ಭಾವನೆಗಳಿಗೆ ಧಕ್ಕೆ ಬಾರದಂತೆ ಕೂಡಲೇ ಸಭೆ ನಡೆಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳದ ಮೋಹನ್ ಕುಮಾರ್ ಅವರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದು, ತಕ್ಷಣವೇ ಎಚ್ಚೆತ್ತುಕೊಂಡು ಸಭೆ ನಡೆಸಿ ದಸರಾ ಮಹೋತ್ಸವದ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ದೇವಸ್ಥಾನದ ಭಕ್ತರ ಪರವಾಗಿ ಆಗ್ರಹಿಸಿದ್ದಾರೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.