ವಿದ್ಯಾರ್ಥಿಗಳು ಜ್ಞಾನದ ಜೊತೆ ಸಂಸ್ಕಾರ ಕಲಿಯಬೇಕು - ಡಾ. ರವಿಕುಮಾರ್. ಸಿ

ವಿದ್ಯಾರ್ಥಿಗಳಿಗೆ ಓದಿನ ಜ್ಞಾನದ ಜೊತೆ ಉತ್ತಮವಾದ ಸಂಸ್ಕಾರ ಮುಖ್ಯ ಎಂದು ನವೋದಯ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ರವಿಕುಮಾರ್. ಸಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ ಕಲಿಕೆ ನಿರಂತರವಾದ ಪ್ರಕ್ರಿಯೆ ಇಲ್ಲಿ ವಿದ್ಯಾರ್ಥಿಗಳು ಜ್ಞಾನದ ಜೊತೆ ಸಮಾಜದ ಮಧ್ಯೆ ಬದುಕುವಾಗ ಉತ್ತಮ ಸಂಸ್ಕಾರ ಕಲಿಯುವ ಮೂಲಕ ಉತ್ತಮ ಗುರಿಯತ್ತ ಸಾಗಬೇಕು ಎಂದರು. ಬದುಕಿನಲ್ಲಿ ಅನುಭವ ಕಲಿಸುವ ಪಾಠ ಶ್ರೇಷ್ಠ. ನಿರಂತರವಾಗಿ ಶ್ರಮ ಪಟ್ಟರೆ ಯಶಸ್ಸು ನಿಮ್ಮ ಬಳಿಯಲ್ಲಿ ಇರುತ್ತದೆ. ಆತ್ಮ ವಿಶ್ವಾಸದಿಂದ ಹೆಜ್ಜೆ ಇಟ್ಟಾಗ ನಾವು ಮಾಡುವ ಕೆಲಸ ಒಳ್ಳೆಯ ಗುರಿ ಮುಟ್ಟುತ್ತದೆ ಎಂದರು.
ಬುದ್ಧ, ಬಸವ, ಗಾಂಧಿ ಅಂಬೇಡ್ಕರ್, ಕುವೆಂಪು,ವಿಚಾರ ಧಾರೆ ನಮ್ಮ ಬದುಕು ರೂಪಿಸುವ ಶಕ್ತಿಯಾಗಬೇಕು. ತನ್ನರಿವು ತನಗೆ ಗುರುವಾದಗ ಮಾತ್ರ ಒಳ್ಳೆಯ ಗುರಿ ಮುಟ್ಟಲು ಸಾಧ್ಯ, ಹೀಗಾಗಿ ವಿದ್ಯಾರ್ಥಿಗಳು ಗುರು - ಹಿರಿಯರ, ಉಪನ್ಯಾಸಕರ ಹಾದಿಯಲ್ಲಿ ಅವರ ಮಾರ್ಗದರ್ಶನದಿಂದ ಬೆಳೆದಾಗ ಮಾತ್ರ ತಮ್ಮ ಕನಸುಗಳನ್ನು ಈಡೇರಿಸಿ ಕೊಳ್ಳಲು ಸಾಧ್ಯ. ಈ ನೆಲ, ಜಲ, ಭಾಷೆಯ ಬಗ್ಗೆ ನಮ್ಮೆಲ್ಲರಿಗೂ ಅಭಿಮಾನ ಇರಬೇಕು. ಪ್ರತಿಯೊಬ್ಬರ ವಿಚಾರಗಳನ್ನು ಗೌರವಿಸಿದಾಗ ಬೆಳವಣಿಗೆ ಸಾಧ್ಯ. ಕುವೆಂಪು ರವರ ವಿಶ್ವಮಾನವ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಬೆಳೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ವಿದ್ಯಾರ್ಥಿಗಳು ಸಾಹಿತ್ಯದ ಕಡೆಗೆ ಗಮನ ಹರಿಸಿ ಒಳ್ಳೆಯ ಸಂಗತಿಗಳನ್ನು ತಿಳಿಯಬೇಕು, ಆ ಮೂಲಕ ಗ್ರಾಮೀಣ ಭಾಗದಿಂದ ಬೆಳೆದು ಉನ್ನತ ಕನಸು ಕಂಡು, ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಬೇಕು ಎಂದರು. ಅಕ್ಷರ ಮತ್ತು ಪುಸ್ತಕ ಪ್ರೀತಿ ನಿಮ್ಮೆಲ್ಲರಲ್ಲಿ ಬೆಳೆಯಲಿ ಎಂದರು. ಉತ್ತಮ ಹಾದಿಯಲ್ಲಿ ಒಳ್ಳೆಯ ಫಲಿತಾಂಶ ತಂದು ಕಾಲೇಜಿಗೆ ಕೀರ್ತಿ ತನ್ನಿ ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಬಿ ಎಂ ಎಸ್ ಸ. ಪ್ರ. ದ. ಕಾಲೇಜಿನ ಪ್ರಾ0ಶುಪಾಲರಾದ ಪ್ರೊ. ವೀರಣ್ಣ ಮಾತನಾಡಿ ವಿದ್ಯಾರ್ಥಿಗಳು ಗುರಿಯನ್ನು ಶ್ರದ್ದೆ, ಏಕಾಗ್ರತೆ ಮೂಲಕ ಸಾಧಿಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನು ಆಸ್ತಿ ಮಾಡಿ ಎಂದು ಹೇಳಿದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳಿ ಹೆಣ್ಣು ಮಕ್ಕಳು ಉತ್ತಮ ದಾರಿ ಆಯ್ಕೆ ಮಾಡಿಕೊಂಡು, ಮೊಬೈಲ್ ಬಳಕೆಯಿಂದ ದೂರ ಇರಿ ಎಂದು ಹೇಳಿದರು. ಭೂಮಿಗೆ ಬಿದ್ದ ಬೀಜ ಫಲ ಕೊಡುವಂತೆ ಅಕ್ಷರ ನಿಮ್ಮೆಲ್ಲರ ಬದುಕಿಗೆ ದಾರಿದೀಪ ಆಗಲಿ ಎಂದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾ0ಶುಪಾಲರಾದ ಶ್ರೀಮತಿ ಶೈಲಜ ವಹಿಸಿ ವರ್ಷಪೂರ್ತಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲು ಸಹಕರಿಸಿದ ಎಲ್ಲರಿಗೂ ಶುಭಾಶಯ ತಿಳಿಸಿ ವಿದ್ಯಾರ್ಥಿಗಳು ಕಾರ್ಯಕ್ರಮದ ಉದ್ದೇಶ ಮತ್ತು ಆಶಯ ತಿಳಿದುಕೊಂಡು ಹೆಜ್ಜೆ ಇಡಿ ಎಂದರು. ಬಾಲಕಿಯರ ಈ ಕಾಲೇಜು ನಿಮಗೆ ಮುಂದಿನ ಬದುಕಿಗೆ ದಾರಿದೀಪ ಆಗಲಿ ಎಂದರು. ಉತ್ತಮ ಅಂಕ ಗಳಿಸಿ ಎಲ್ಲರೂ ಒಳ್ಳೆಯ ಹುದ್ದೆ ಪಡೆಯಿರಿ ಎಂದರು.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕಾಲೇಜು ಅಭಿರುದ್ದಿ ಸಮಿತಿಯ ಉಪಾಧ್ಯಕ್ಷರಾದ ಶಂಕರಪ್ಪ ನಂದವಾಡಗಿ, ಕೆಂಕೆರೆ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಮೂರ್ತಿ, ಕನಕದಾಸ ಪ. ಪೂ. ಕಾಲೇಜಿನ ಪರಮೇಶ್ವರಪ್ಪ ಕಾಲೇಜಿನ ಉಪನ್ಯಾಸಕರಾದ ಹೆಚ್, ಎಸ್. ನಾರಾಯಣ, ಲೋಕೇಶ್, ಪ್ರಸನ್ನ, ಮತ್ತಿತರರು, ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಮಕ್ಕಳಿಂದ ಸಾ0ಸ್ಕೃತಿಕ ಕಾರ್ಯಕ್ರಮ ನಡೆದವು.

83

© ಹುಳಿಯಾರು ಸಮಗ್ರ ಸುದ್ಧಿ . All Rights Reserved.