ಹುಳಿಯಾರು: ಹುಳಿಯಾರು ಪೊಲೀಸ್ ಠಾಣೆಯಲ್ಲಿ ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸುವ ಕುರಿತು ಸಾರ್ವಜನಿಕರ ಶಾಂತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಸಿಪಿಐ ನದಾಫ್ ಮತ್ತು ಪಿಎಸ್ಐ ಧರ್ಮಾಂಜಿ ಅವರು ಸಾರ್ವಜನಿಕರಿಗೆ ಹಬ್ಬಗಳ ಆಚರಣೆಯ ಕುರಿತು ಮಾರ್ಗದರ್ಶನ ನೀಡಿದರು.
ಸಿಪಿಐ ನದಾಫ್ ಮಾತನಾಡಿ, ಯಾವುದೇ ಹಬ್ಬಗಳ ಆಚರಣೆ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿಯೊಂದು ಸಮುದಾಯದವರು ಹಬ್ಬಗಳನ್ನು ನೆಮ್ಮದಿಯಿಂದ ಆಚರಿಸಬೇಕೆಂಬುದು ಪೊಲೀಸ್ ಇಲಾಖೆಯ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಸಮಾಜಘಾತಕ ಶಕ್ತಿಗಳ ಬಗ್ಗೆ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಪ್ರಮುಖ ನಿರ್ದೇಶನಗಳು:
* ರಾಜ್ಯ ಸರ್ಕಾರದ ಆದೇಶದಂತೆ, ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಗೆ ಅವಕಾಶ ಇರುವುದಿಲ್ಲ. ಹಗಲು ಸಮಯದಲ್ಲಿ ಹಬ್ಬದ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು.
* ಡಿಜೆ ಬಳಕೆಗೆ ಅನುಮತಿ ಇಲ್ಲ. ರಾತ್ರಿ 10 ಗಂಟೆಯ ನಂತರ ಯಾವುದೇ ಕಾರಣಕ್ಕೂ ಮೈಕ್ ಅಥವಾ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
* ಮೆರವಣಿಗೆಗಳ ಮಾರ್ಗಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪೊಲೀಸರು ಅನುಮತಿಸಿದ ಮಾರ್ಗದಲ್ಲೇ ಮೆರವಣಿಗೆ ಸಾಗಬೇಕು, ಮಾರ್ಗವನ್ನು ಬದಲಿಸುವಂತಿಲ್ಲ.
* ಹಬ್ಬಗಳ ಆಚರಣೆಗೆ ಅಗತ್ಯವಿರುವ ಅನುಮತಿಗಳನ್ನು ಪಡೆಯಲು ಏಕಗವಾಕ್ಷಿ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕ, ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ, ಮತ್ತು ಪಟ್ಟಣ ಪಂಚಾಯಿತಿಯಿಂದ ಫ್ಲೆಕ್ಸ್, ಬಂಟಿಂಗ್ಸ್ ಹಾಕಲು ಅನುಮತಿ ಪಡೆಯುವುದು ಕಡ್ಡಾಯ.
* ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ವಿಸರ್ಜನಾ ಮೆರವಣಿಗೆಯನ್ನು ರಾತ್ರಿ 10:00 ಗಂಟೆಯೊಳಗೆ ಮುಗಿಸಬೇಕು. ಸಾಧ್ಯವಾದಷ್ಟು ಕಾರ್ಯಕ್ರಮಗಳನ್ನು ಹಗಲಿನ ಸಮಯದಲ್ಲಿ ಮುಗಿಸಿಕೊಳ್ಳುವುದು ಉತ್ತಮ.
* ಹಬ್ಬದ ಮೆರವಣಿಗೆಗಳಲ್ಲಿ ಯುವಕರು ಯಾವುದೇ ತೊಂದರೆ ಮಾಡದಂತೆ ನೋಡಿಕೊಳ್ಳಬೇಕು. ಕುಡಿದು ಗಲಾಟೆ ಮಾಡುವ ಪ್ರಕರಣಗಳು ನಡೆಯದಂತೆ ಎಲ್ಲರೂ ಸಹಕರಿಸಬೇಕು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.