ಪಟ್ಟಣದ ಕೇಶವ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಟಿ ಜಯಣ್ಣನವರು ಮಾತನಾಡಿ ಎಷ್ಟು ಓದಿದ್ದೇವೆ ಯಾವ ಪದವಿ ಪಡೆದಿದ್ದೇವೆ ಎಂಬುದು ಮುಖ್ಯವಲ್ಲ ನಿಜವಾದ ಶಿಕ್ಷಣ ಎಂದರೆ ಬೇರೆಯವರೊಂದಿಗಿನ ನಮ್ಮ ಮಾತು ,ಸಂಸ್ಕಾರ ,ನಡವಳಿಕೆ, ಇವು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು. ಮನೆಯಲ್ಲಿ ಪೋಷಕರು ಸಂಸ್ಕಾರಯುತವಾದ ಮಾರ್ಗದರ್ಶನ ನೀಡುತ್ತಾ ಸಂಬಂಧಗಳನ್ನು ಗೌರವಿಸುವ ಹಾಗೆ ಮಾಡಿ ಅಪ್ಪ , ಅಮ್ಮ,ಚಿಕ್ಕಪ್ಪ, ಅತ್ತೆ, ಮಾವ, ಅಣ್ಣ, ತಮ್ಮ, ಅಕ್ಕ, ತಂಗಿ, ಅಜ್ಜ ,ಅಜ್ಜಿ , ಎಲ್ಲರನ್ನು ಪ್ರೀತಿಸುವ ಮೂಲಕ ಸಂಬಂಧವನ್ನು ಗಟ್ಟಿ ಮಾಡುವ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಹಾಗೂ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಸ್ಕಾರಯುತ ಶಿಕ್ಷಣ ಲಭ್ಯವಾದರೆ ಮಾತ್ರ ಮಕ್ಕಳು ಸಮಾಜಕ್ಕೆ ಉತ್ತಮ ಕೊಡುಗೆಗಳಾಗುತ್ತಾರೆ ಎಂದರು
ಸಮಾರೋಪ ಭಾಷಣ ಮಾಡಿದ ಟಿ.ಬಿ . ಶ್ರೀಕಂಠ ಮೂರ್ತಿರವರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯವಶ್ಯಕ ಹಾಗಾಗಿ ಇಂತಹ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕುವ ವೇದಿಕೆಗಳಾಗಿವೆ. ಕೇವಲ ಪಠ್ಯಪುಸ್ತಕಗಳಿಂದ ನಾವು ಮಹಾನ್ ವ್ಯಕ್ತಿಗಳಾಗುವುದಿಲ್ಲ ಪುಸ್ತಕದಲ್ಲಿನ ಸಂಸ್ಕಾರಯುತವಾದ ಮೌಲ್ಯಗಳನ್ನು ಅನುಷ್ಠಾನಗೊಳಿಸಿಕೊಂಡಾಗ ಮಾತ್ರ ಮಹಾತ್ಮರಾಗಬಹುದು ಎಂದು ತಿಳಿಸಿದರು. ಪೋಷಕರು ತಮ್ಮ ಮಕ್ಕಳು ಪ್ರತಿ ವರ್ಷ ಎಷ್ಟು ಅಂಕಗಳಿಸುತ್ತಾರೆ ಎಂಬುದನ್ನು ಬಿಟ್ಟು ವರ್ಷದಿಂದ ವರ್ಷಕ್ಕೆ ಎಷ್ಟು ಸಂಸ್ಕಾರ ಕಲಿಯುತ್ತಿದ್ದಾರೆ ಎಂಬುದರ ಬಗ್ಗೆ ಚಿಂತಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಎಸ್ ಈಶ್ವರಯ್ಯನವರು ಮಾತನಾಡಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಟ್ಟು ಶಾಲೆಯಲ್ಲಿ ಏನನ್ನು ಕಲಿಯುತ್ತಿದ್ದಾರೆ ಶಾಲೆಯಲ್ಲಿ ಪಾಠ ಪ್ರವಚನ ಯಾವ ರೀತಿ ಇದೆ ಎಂತಹ ಸ್ನೇಹಿತರನ್ನು ಸಂಪಾದಿಸಿದ್ದಾರೆ ಏನೇನು ಹವ್ಯಾಸಗಳನ್ನು ರೂಡಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಗಮನಹರಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ವರ್ಗಾವಣೆಗೊಂಡ ಶ್ರೀಮತಿ ಚಂದ್ರಕಲಾ ಮಾತಾಜಿಯವರನ್ನು ಆಡಳಿತ ಮಂಡಳಿಯ ಪರವಾಗಿ ಹಾಗೂ ಶಿಕ್ಷಕ ವೃಂದದ ಪರವಾಗಿ ಅಭಿನಂದಿಸಲಾಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ದಾಸಪ್ಪನವರು ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಎಂ. ವಿ .ರಮೇಶ್, ಎಂ.ಜಿ. ನಾಗಭೂಷಣ್, ಎಚ್.ಎನ್. ಸತೀಶ್, ಆರ್. ಚನ್ನಬಸವಯ್ಯ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಯರಾದ ಸನತ್ ಕುಮಾರ್ ರವರು ಶಾಲಾ ಶೈಕ್ಷಣಿಕ ವರದಿಯನ್ನು ಪ್ರಸ್ತುತಪಡಿಸಿದರು. ಶಿಕ್ಷಕ ಮಧು ನಿರೂಪಿಸಿದರು ರವಿಶಂಕರ್ ಸ್ವಾಗತಿಸಿದರು ಶ್ರೀನಿವಾಸ್ ವಂದಿಸಿದರು ಅಲ್ಫಾನೂರ್ ಮತ್ತು ಮಾನ್ಯ ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಲೀಲಾವತಿ, ಎಸ್ .ಎನ್. ಗೀತಾ, ಪಾವನ, ಸುಮಾ , ಎಸ್. ಕೆ. ಗೀತಾ, ಜ್ಯೋತಿ, ಲತಾ, ರಾಜಮ್ಮ, ಸರಸ್ವತಿ, ಚಂದ್ರಮ್ಮ ಹಾಗೂ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.